ರಿಪ್ಪನ್, ಲಾರ್ಡ್
1880-84. ಬ್ರಿಟನ್‍ನ ಪ್ರಧಾನಿ ಗ್ಲಾಡ್‍ಸ್ಟನ್‍ನ ಶಿಷ್ಯ. ಭಾರತದ 8ನೆಯ ವೈಸ್‍ರಾಯ್ ಹಾಗೂ ಗವರ್ನರ್ ಜನರಲ್. ಇವನ ತಂದೆ ಫ್ರೆಡರಿಕ್ ಜಾನ್‍ರಾಬಿನ್‍ಸನ್. ಭಾರತಕ್ಕೆ ಬರುವ ಮೊದಲು 30 ವರ್ಷ ಇಂಗ್ಲೆಂಡ್ ಶಾಸನಸಭೆಯ ಸದಸ್ಯನಾ ಗಿದ್ದ. ಈತ ವೈಸ್‍ರಾಯ್ ಆದ ಅನಂತರ(1880) ಭಾರತ ಸರ್ಕಾರವನ್ನು ಉದಾರೀಕರಿಸುವ ನಿಟ್ಟಿನಲ್ಲಿ ನಿರತನಾದ. ಈತ ಅನೇಕ ಗಮನಾರ್ಹ ಸುಧಾರಣೆ ಗಳನ್ನು ಜಾರಿಗೊಳಿಸಿದ. ಲಾರ್ಡ್‍ಲಿಟ್ಟನ್‍ನ ದೇಶೀಯ ಪತ್ರಿಕಾಶಾಸನ ರದ್ದುಗೊಳಿಸಿ, ಭಾರತೀಯರು ರಾಜಕೀಯ, ಸಾಮಾಜಿಕ ವಿಚಾರಗಳನ್ನು ವಿಮರ್ಶಿಸಲು ಅವಕಾಶ ಕಲ್ಪಿಸಿಕೊಟ್ಟ. ವಿಲಿಯಂ ಹಂಟರ್ ಅಧ್ಯಕ್ಷತೆಯಲ್ಲಿ ಶಿಕ್ಷಣ ಆಯೋಗ ರಚಿಸಿ ಪ್ರಾಥಮಿಕ, ಪ್ರೌಢಶಿಕ್ಷಣ ಸುಧಾರಣೆಗೊಳಿಸಿದ (1882). ಸರ್ಕಾರದ ಗೊತ್ತುವಳಿ ಮೂಲಕ ಸ್ಥಳೀಯ ಆಡಳಿತ ಮೇಲ್ವಿಚಾರಣೆ ಜವಾಬ್ದಾರಿಯನ್ನು ಭಾರತೀಯರಿಗೆ ಬಿಟ್ಟುಕೊಟ್ಟ. ಸ್ಥಳೀಯ ನಾಮಕರಣಕ್ಕೆ ಬದಲಾಗಿ ಚುನಾಯಿಸುವ ಪದ್ಧತಿ ಜಾರಿಗೊಳಿಸಿದ. ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾಸ್ಥಳೀಯಸಂಸ್ಥೆಗಳನ್ನು ಸ್ಥಾಪಿಸಿದ. ಪಟ್ಟಣಗಳಲ್ಲಿ ಪುರಸಭೆಗಳ ಜವಾಬ್ದಾರಿ ಹೆಚ್ಚಿಸಿ ಸ್ಥಳೀಯ ಸ್ವಯಂ ಆಡಳಿತದ ಪಿತಾಮಹ ಎನಿಸಿಕೊಂಡ. ಇಲ್ಬರ್ಟ್ ಮಸೂದೆ ಮೂಲಕ ಭಾರತೀಯ ನ್ಯಾಯಾಧೀಶರು ಐರೋಪ್ಯ ನ್ಯಾಯಾಧೀಶರಂತೆ ಬ್ರಿಟಿಷರನ್ನು ವಿಚಾರಣೆ ಮಾಡುವ ಅಧಿಕಾರ ಕಲ್ಪಿಸಿದ್ದು ಇವನ ಪ್ರಮುಖ ಸಾಧನೆ. ಬಂಗಾಲ, ಔಧ್ ಪ್ರಾಂತ್ಯಗಳ ರೈತರ ಹಿತದೃಷ್ಟಿಯಿಂದ ಟೆನೆನ್ಸಿ ಕಾಯಿದೆ, ಕಾರ್ಮಿಕ ಕಾರ್ಖಾನೇ ಕಾಯಿದೆ (1881) ಇವೆ ಮುಂತಾದ ಕಾನೂನು ಗಳನ್ನು ಈತ ಜಾರಿಗೆ ತಂದ. ಅದಕ್ಷ ಆಡಳಿತದ ನೆಪದಿಂದ ವಶಪಡಿಸಿ ಕೊಂಡಿದ್ದ ಮೈಸೂರನ್ನು ಮೂರನೆಯ ಕೃಷ್ಣರಾಜ ಒಡೆಯರಿಗೆ ವರ್ಗಾಯಿಸಿದ (1881). ಭಾರತದ ಪ್ರಥಮ ಜನಗಣತಿ ನಡೆಸಿದ ಇವನು ಉದಾರವಾದಿಯಾಗಿದ್ದ. ಈತ ಭಾರತದ ಆಪ್ತ ಸ್ನೇಹಿತನಂತಿದ್ದ.	
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ